Karnataka logo

Karnataka Tourism
GO UP
Udupi Paryaya Utsava

ಉಡುಪಿ ಪರ್ಯಾಯ ಉತ್ಸವ

separator
  /  ಉಡುಪಿ ಪರ್ಯಾಯ ಉತ್ಸವ

ಉಡುಪಿ  ಪರ್ಯಾಯ ಉತ್ಸವ ಕರಾವಳಿ ಕರ್ನಾಟಕದ ಉಡುಪಿಯಲ್ಲಿ ನಡೆಯುವ ದ್ವೈವಾರ್ಷಿಕ ಹಬ್ಬವಾಗಿದೆ. ಉಡುಪಿ ಶ್ರೀ ಕೃಷ್ಣ ದೇವಾಲಯದ ನಿರ್ವಹಣೆಯನ್ನು ಉಡುಪಿಯ ಅಷ್ಟ ಮಠಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಹಸ್ತಾಂತರಿಸುವುದನ್ನು ಪರ್ಯಾಯ ಉತ್ಸವದ ಮೂಲಕ ಆಚರಿಸಲಾಗುತ್ತದೆ.  

ಹಿನ್ನೆಲೆ: ಉಡುಪಿ ಶ್ರೀಕೃಷ್ಣ ದೇವಸ್ಥಾನವನ್ನು ಎಂಟು ಮಠಗಳು ಸರದಿಯಲ್ಲಿ ನಿರ್ವಹಿಸುತ್ತವೆ. ಇವುಗಳನ್ನು ಅಷ್ಟ ಮಠಗಳೆಂದು ಕರೆಯಲಾಗುತ್ತದೆ. ಪುತ್ತಿಗೆ, ಪುಲಿಮಾರು, ಅದಮಾರು, ಶಿರೂರು, ಪೇಜಾವರ, ಸೋಧೆ, ಕಣಿಯೂರು ಮತ್ತು ಕೃಷ್ಣಪುರ ಇವು ಈ ಎಂಟು ಮಠಗಳಾಗಿವೆ. ಪ್ರತಿ ಮಠದ ನೇತೃತ್ವವನ್ನು ಸ್ವಾಮೀಜಿಗಳು ನಿರ್ವಹಿಸುತ್ತಾರೆ.  ಪ್ರತಿ ಮಠವು ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ದೇವಸ್ಥಾನದ ಉಸ್ತುವಾರಿ ನಿರ್ವಹಿಸಿ ಪರ್ಯಾಯ ಉತ್ಸವದ ವೇಳೆ ಇನ್ನೊಂದು ಮಠಕ್ಕೆ ಹಸ್ತಾಂತರಿಸುತ್ತಾರೆ. 

ಪರ್ಯಾಯ ಉತ್ಸವ: ಪರ್ಯಾಯ ಉತ್ಸವದ ಆಚರಣೆಗಳು ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ದೇವಾಲಯದ ನಿರ್ವಹಣೆಯನ್ನು ವಹಿಸಿಕೊಳ್ಳಲಿರುವ ಮಠದ ಸ್ವಾಮೀಜಿಗಳು ಪುಷ್ಕರಿಣಿಯಲ್ಲಿ ಪವಿತ್ರ ಸ್ನಾನ ಮಾಡಿ  ಶ್ರೀ ಕೃಷ್ಣ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಸಾಗುತ್ತಾರೆ. ಮೆರವಣಿಗೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಜೊತೆಗಿರುತ್ತವೆ. ಶ್ರೀ ಕೃಷ್ಣ ದೇವಸ್ಥಾನದಲ್ಲಿ, ನಿರ್ವಹಣೆಯನ್ನು ಹಸ್ತಾಂತರಿಸಬೇಕಾದ ಪ್ರಸ್ತುತ ಸ್ವಾಮೀಜಿಗಳು ಅನೇಕ ಆಚರಣೆಗಳನ್ನು ಮಾಡುತ್ತಾರೆ ಮತ್ತು ದೇವಾಲಯದ ಕೀಲಿಗಳು, ಅಕ್ಷಯ ಪಾತ್ರೆ ಮತ್ತು ಇತರ ಪೂಜಾ ಸಾಮಗ್ರಿಗಳನ್ನು ನೀಡಿ ಅಧಿಕಾರ ಹಸ್ತಾಂತರಿಸುತ್ತಾರೆ. ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಸಾರ್ವಜನಿಕ ಸೇವೆ ಮತ್ತು ದರ್ಬಾರ್ ಅನ್ನು ಆಮೇಲೆ ನಡೆಸಲಾಗುತ್ತದೆ.

ಆಚರಣೆಗಳು: ಪರ್ಯಾಯ ಉತ್ಸವ ಸಮಯದಲ್ಲಿ ಉಡುಪಿ ನಗರವು ಅತ್ಯುತ್ತಮವಾಗಿ ಶೃಂಗರಿಸಿಕೊಂಡು ಮದುವಣಗಿತ್ತಿಯಂತೆ ಕಾಣುತ್ತದೆ. ಪರ್ಯಾಯ ಉತ್ಸವ ಅಂಗವಾಗಿ ಹಲವಾರು ಶಾಪಿಂಗ್, ಆಹಾರ ಉತ್ಸವ ಮತ್ತು ಮನರಂಜನಾ ಕಾರ್ಯಕ್ರಮಗಳು ಸಂದರ್ಶಕರಿಗೆ ಲಭ್ಯವಿರುತ್ತವೆ.

ಮುಂದಿನ ಆವೃತ್ತಿ: ಉಡುಪಿ ಪರ್ಯಾಯ ಉತ್ಸವ ದ ಮುಂದಿನ ಆವೃತ್ತಿ 2022 ರ ಜನವರಿ 18 ರಂದು ನಡೆಯಲಿದೆ.

ತಲುಪುವುದು ಹೇಗೆ: ಉಡುಪಿ ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (60 ಕಿ.ಮೀ). ಉಡುಪಿಗೆ ರೈಲು ಮತ್ತು ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕವಿದೆ. 

ವಸತಿ: ಉಡುಪಿ ಪಟ್ಟಣದಲ್ಲಿ ಹಲವಾರು ಐಷಾರಾಮಿ ಮತ್ತು ಬಜೆಟ್ ವಸತಿ ಗೃಹಗಳಿವೆ.