GO UP

ಕರ್ನಾಟಕದಲ್ಲಿ ದೀಪಾವಳಿ ಸಂಭ್ರಮ: ಬೆಳಕು ಮತ್ತು ಸಂತಸದ ಮಹೋತ್ಸವ

Deepavali

ದೀಪಗಳು, ರಂಗೋಲಿಗಳು, ಸಂತೋಷ ಮತ್ತು ಸಂಪ್ರದಾಯದೊಂದಿಗೆ ಕರ್ನಾಟಕದ ಮೂಲೆ ಮೂಲೆಯನ್ನೂ ಬೆಳಗಿಸುವ ನಮ್ಮ ನಾಡಿನ ದೀಪಾವಳಿ ಹಬ್ಬದ ಸಡಗರವನ್ನು ಅನುಭವಿಸಿ.

ಬೆಳಕಿನ ಹಬ್ಬವಾದ ದೀಪಾವಳಿಯು ಭಾರತದಾದ್ಯಂತ ಸಂತೋಷ, ಭಕ್ತಿ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಪಸರಿಸುತ್ತದೆ. ಕರ್ನಾಟಕದಲ್ಲಿ, ಇದನ್ನು “ದೀಪಗಳ ಸಾಲು” ಎಂಬ ಅರ್ಥವನ್ನು ನೀಡುವ ದೀಪಾವಳಿ ಎಂದೇ ಕರೆಯಲಾಗುತ್ತದೆ. ಈ ಭವ್ಯ ಹಬ್ಬವು ಕೆಡುಕಿನ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುತ್ತದೆ ಮತ್ತು ನಮ್ಮ ರಾಜ್ಯವನ್ನು ಸಂಭ್ರಮ, ವಿಶ್ವಾಸ ಮತ್ತು ಕೌಟುಂಬಿಕ ಬಾಂಧವ್ಯದ ಉತ್ಸಾಹದಿಂದ ತುಂಬುತ್ತದೆ.

ದೀಪಾವಳಿಯ ಮಹತ್ವ
ಭಾರತದಾದ್ಯಂತ ದೀಪಾವಳಿಯ ಸಂಪ್ರದಾಯಗಳು ಭಿನ್ನವಾಗಿದ್ದರೂ, ಕತ್ತಲೆಯ ಮೇಲೆ ಬೆಳಕು ಸಾಧಿಸಿದ ವಿಜಯದ ಮೂಲಭೂತ ಸಾರವು ಒಂದೇ ಆಗಿರುತ್ತದೆ. ಉತ್ತರ ಭಾರತದಲ್ಲಿ, ಇದು ರಾವಣನ ಮೇಲಿನ ವಿಜಯದ ನಂತರ ಶ್ರೀರಾಮನು ಮನೆಗೆ ಹಿಂದಿರುಗಿದ ದಿನವನ್ನು ಸ್ಮರಿಸುತ್ತದೆ; ಅದೇ ರೀತಿ ದಕ್ಷಿಣ ಭಾರತದಲ್ಲಿ, ಇದು ನರಕಾಸುರನೆಂಬ ರಾಕ್ಷಸನ ಮೇಲೆ ಶ್ರೀ ಕೃಷ್ಣನು ಸಾಧಿಸಿದ ವಿಜಯದ ಪ್ರತೀಕವಾಗಿದೆ. ಇದರೊಂದಿಗೆ, ದಕ್ಷಿಣದ ಹಲವು ಭಾಗಗಳಲ್ಲಿ ಚಕ್ರವರ್ತಿ ಬಲಿಗಾಗಿ ಶ್ರೀ ಮಹಾವಿಷ್ಣುವು ಸಾಧಿಸಿದ ವಿಜಯವನ್ನು ಗೌರವಿಸಲಾಗುತ್ತದೆ.

ಕರ್ನಾಟಕದಲ್ಲಿ ಐದು ದಿನಗಳ ಸಡಗರ

ಕರ್ನಾಟಕದಲ್ಲಿ ದೀಪಾವಳಿಯನ್ನು ಐದು ಮಂಗಳಕರ ದಿನಗಳವರೆಗೆ ಆಚರಿಸಲಾಗುತ್ತದೆ. ಪ್ರತಿ ದಿನವೂ ತನ್ನದೇ ಆದ ವಿಶಿಷ್ಟ ಆಚರಣೆಗಳು ಮತ್ತು ಹಬ್ಬದ ವಾತಾವರಣವನ್ನು ಹೊಂದಿರುತ್ತದೆ:
ಧನತೇರಸ್ : ಈ ಮೊದಲ ದಿನವು ಹಬ್ಬದ ಸಡಗರಕ್ಕೆ ನಾಂದಿ ಹಾಡುತ್ತದೆ. ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿ ಜನರು ಚಿನ್ನ, ಬೆಳ್ಳಿ ಅಥವಾ ಹೊಸ ಪಾತ್ರೆಗಳನ್ನು ಖರೀದಿಸುತ್ತಾರೆ.
ನರಕ ಚತುರ್ದಶಿ : ಅಮಾವಾಸ್ಯೆಯ ಹಿಂದಿನ ದಿನ ಇದನ್ನು ಆಚರಿಸಲಾಗುತ್ತದೆ. ಇದು ನರಕಾಸುರನ ಅಂತ್ಯ ಮತ್ತು ಋಣಾತ್ಮಕ ಶಕ್ತಿಯ ಶುದ್ಧೀಕರಣವನ್ನು ಸೂಚಿಸುತ್ತದೆ.
ಅಮಾವಾಸ್ಯೆ (ಲಕ್ಷ್ಮಿ ಪೂಜೆ): ಇದು ಮುಖ್ಯ ದಿನವಾಗಿದ್ದು, ಮನೆಗಳನ್ನು ದೀಪಗಳಿಂದ ಬೆಳಗಿಸಲಾಗುತ್ತದೆ ಮತ್ತು ಸಮೃದ್ಧಿ ಹಾಗೂ ಸಂತೋಷಕ್ಕಾಗಿ ಮಹಾಲಕ್ಷ್ಮಿ ದೇವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.
ಕೇದಾರ ಗೌರಿ ವ್ರತ : ವೈವಾಹಿಕ ಸಾಮರಸ್ಯ ಮತ್ತು ಆಶೀರ್ವಾದಕ್ಕಾಗಿ ಪಾರ್ವತಿ ದೇವಿಗೆ ಸಮರ್ಪಿತವಾದ ಪವಿತ್ರ ಆಚರಣೆ.
ಬಲಿ ಪಾಡ್ಯಮಿ : ಈ ಅಂತಿಮ ದಿನವು ದಾನಶೂರ ಚಕ್ರವರ್ತಿ ಬಲಿಯ ಔದಾರ್ಯ ಮತ್ತು ಧರ್ಮದ ವಿಜಯವನ್ನು ಸ್ಮರಿಸುತ್ತದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಅವನ ಗೌರವಾರ್ಥವಾಗಿ ವಿಶೇಷ ಪೂಜೆ ಹಾಗೂ ವಿಧಿಗಳನ್ನು ನಡೆಸಲಾಗುತ್ತದೆ.

ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಹಬ್ಬದ ಉತ್ಸಾಹ

ದೀಪಾವಳಿಯ ಸಮಯದಲ್ಲಿ ಕರ್ನಾಟಕವು ಹೊಳೆಯುವ ದೀಪಗಳು, ವರ್ಣರಂಜಿತ ರಂಗೋಲಿಗಳು ಮತ್ತು ಪರಿಮಳಯುಕ್ತ ಹೂವಿನ ಅಲಂಕಾರಗಳಿಂದ ಜೀವಕಳೆಯನ್ನು ಪಡೆಯುತ್ತದೆ. ರಾಜ್ಯದಾದ್ಯಂತ ಇರುವ ದೇವಾಲಯಗಳಲ್ಲಿ ಭವ್ಯವಾದ ಲಕ್ಷ್ಮಿ ಪೂಜೆಗಳನ್ನು ಏರ್ಪಡಿಸಲಾಗುತ್ತದೆ. ದೀಪಗಳು ಮತ್ತು ಸಾಂಪ್ರದಾಯಿಕ ಅಲಂಕಾರಗಳು ದೈವಿಕತೆಯನ್ನು ಹೆಚ್ಚಿಸುತ್ತವೆ.
ಗ್ರಾಮೀಣ ಕರ್ನಾಟಕದಲ್ಲಿ, ಕೇವಲ ಲಕ್ಷ್ಮಿ ಪೂಜೆಯ ಹೊರತಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳಂತಹ ಹಲವು ಆಸಕ್ತಿದಾಯಕ ಆಚರಣೆಗಳು ಈ ಹಬ್ಬವನ್ನು ಇನ್ನಷ್ಟು ಸುಂದರವಾಗಿಸುತ್ತವೆ. ನಗರ ಪ್ರದೇಶಗಳಲ್ಲಿ, ದೀಪಾವಳಿಯು ಮಹಾಲಕ್ಷ್ಮಿ ಮತ್ತು ವಿಷ್ಣು ದೇವರ ಪೂಜೆಯ ಸುತ್ತ ಸುತ್ತುತ್ತದೆ. ಸಂಪತ್ತು ಮತ್ತು ಸಮೃದ್ಧಿಗಾಗಿ ಲಕ್ಷ್ಮಿಯನ್ನು ಆರಾಧಿಸಿದರೆ, ಬಲಿಯ ಮೇಲಿನ ಜಯಕ್ಕಾಗಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಜನರು ಹಬ್ಬದ ಆಚರಣೆಗಾಗಿ ತಮ್ಮ ಮನೆಗಳನ್ನು ದೀಪಗಳು, ಹೂವಿನ ಜೋಡಣೆ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ಅಲ್ಲದೆ, ಕಡಿಮೆ ಅದೃಷ್ಟವಂತರಿಗೆ ಮತ್ತು ನಿರ್ಗತಿಕರಿಗೆ ದಾನ ನೀಡುವುದರ ಮೂಲಕವೂ ಹಬ್ಬವನ್ನು ಆಚರಿಸುತ್ತಾರೆ.

ಜನರು ವರ್ಣರಂಜಿತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಮೈಸೂರು ಪಾಕ್ ಮತ್ತು ಧಾರವಾಡ ಪೇಡಾದಂತಹ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುತ್ತಾರೆ. ಪಟಾಕಿಗಳನ್ನು ಸಿಡಿಸುವುದು ಮತ್ತು ಎಣ್ಣೆ ದೀಪಗಳನ್ನು ಬೆಳಗಿಸುವುದು ಪ್ರತಿ ಮನೆ ಮತ್ತು ಬೀದಿಗೆ ಹೊಳಪು ಹಾಗೂ ಉತ್ಸಾಹವನ್ನು ತರುತ್ತದೆ.
ಕರ್ನಾಟಕದಲ್ಲಿ ದೀಪಾವಳಿಯ ಮಾಂತ್ರಿಕ ಅನುಭವ
ಅದು ಬೆಂಗಳೂರಿನಲ್ಲಿರುವ ಮಿನುಗುವ ಸಂಭ್ರಮವಾಗಲಿ, ಮೈಸೂರಿನಲ್ಲಿರುವ ಸಾಂಪ್ರದಾಯಿಕ ವಿಧಿವಿಧಾನಗಳಾಗಲಿ ಅಥವಾ ಕರಾವಳಿ ಪಟ್ಟಣಗಳಲ್ಲಿರುವ ಕಡಲ ತೀರದ ಹಬ್ಬದ ವಾತಾವರಣವಾಗಲಿ, ದೀಪಾವಳಿಯ ಸಮಯದಲ್ಲಿ ಕರ್ನಾಟಕದ ಪ್ರತಿ ಮೂಲೆ ಮೂಲೆಗಳೂ ಹಬ್ಬದ ಉಲ್ಲಾಸದಿಂದ ಪ್ರಜ್ವಲಿಸುತ್ತದೆ. ಈ ಆಚರಣೆಯು ಕೇವಲ ವಿಧಿಗಳನ್ನು ಮೀರಿದ್ದು, ಅದು ಸಂತೋಷ, ಒಗ್ಗಟ್ಟು ಮತ್ತು ಆಧ್ಯಾತ್ಮಿಕ ನವೀಕರಣದ ಒಂದು ಸುಂದರ ಅನುಭವವಾಗಿದೆ.

ನಿಮ್ಮ ಬ್ಯಾಗ್‌ಗಳನ್ನು ಸಿದ್ಧಪಡಿಸಿ, ಸುವರ್ಣ ಬೆಳಕಿನಲ್ಲಿ ಮಿಂದೆದ್ದ ನಾಡಿನ ದೃಶ್ಯವನ್ನು ಕಣ್ತುಂಬಿಕೊಳ್ಳಿ ಮತ್ತು ಕರ್ನಾಟಕದ ದೀಪಾವಳಿಯ ಹೊಳಪನ್ನು ಅನುಭವಿಸಿ. ಈ ಹಬ್ಬವು ನಿಜಕ್ಕೂ ಬೆಳಕು, ಪ್ರೀತಿ ಮತ್ತು ಜೀವನವನ್ನೇ ಆಚರಿಸುವ ಸುಸಂದರ್ಭ.